ಆಕ್ರೋಶಕ್ಕೆ ಗುರಿಯಾಗಿ ಹೊರ ನಡೆದ ಸಚಿವರು

ಬೆಳಗಾವಿ – ಸಚಿವರ ಕಾರ್ಯವೈಖರಿಗೆ ಕಾಂಗ್ರೆಸ್‌ ಶಾಸಕರು ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರನ್ನು ಹೊರಗಿಟ್ಟು ಶಾಸಕಾಂಗ ಸಭೆ ನಡೆಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ಆಕ್ರೋಶಕ್ಕೆ ಗುರಿಯಾದ ಕೆಲಸಚಿವರು ಸಭೆಯಿಂದಲೇ ನಿರ್ಗಮಿಸಿದ ಪ್ರಸಂಗವೂ ಸಹ ಜರುಗಿತು. ಭ್ರಷ್ಟಾಚಾರದಲ್ಲಿ ತೊಡಗಿರುವ ಸಚಿವರನ್ನು ಕೂಡಲೇ ಸಂಪುಟದಿಂದ ಕೈಬಿಡಿ. ವರ್ಗಾವಣೆಯಲ್ಲೂ ಅವರು ಲೂಟಿ ಮಾಡುತ್ತಿದ್ದಾರೆ ಎಂದು ಹಲವು ಶಾಸಕರು ಕಿಡಿಕಾರಿದರು. ಶಾಸಕರ ಆಕ್ರೋಶ ಎದುರಿಸಲಾಗದೆ ಅರಣ್ಯ ಸಚಿವ ರಮಾನಾಥರೈ ಶಾಸಕಾಂಗ ಸಭೆಯಿಂದ ಅರ್ಧಕ್ಕೆ ಹೊರ ನಡೆದರು. ವೈದ್ಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌, ಆರೋಗ್ಯ ಸಚಿವ ಯು.ಟಿ.ಖಾದರ್‌, ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್‌ ನಾಯಕ್‌, ಜವಳಿ ಸಚಿವ ಬಾಬೂರಾವ್‌ಚಿಂಚನಸೂರು ಸಭೆಯಿಂದ ಹೊರಬಂದರು. ವಿಧಾನಸಭೆ ಕಲಾಪ ನೆಪವೊಡ್ಡಿ ಸಭೆಯಿಂದ ಹೊರಗೆ ಬಂದರು. ಕೊನೆಗೆ ಬೆಂಗಳೂರಿನಲ್ಲಿ ತಮ್ಮನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಸಚಿವರ ವಿಷಯ ಮಾತನಾಡುವಂತೆ ಸಿದ್ದರಾಮಯ್ಯ ಶಾಸಕರನ್ನು ಸಮಾಧಾನ ಪಡಿಸಿದರು. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸಚಿವರು, ಶಾಸಕರ ಮಾತಿಗೆ ಹಾಗೂ ಶಿ¶ಾರಸುಗಳಿಗೆ ಮನ್ನಣೆ ನೀಡುತ್ತಿಲ್ಲ. ಕಾರ್ಯಕರ್ತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಒಂದು ರೀತಿ ಅಸಡ್ಡೆಯಿಂದ ನಮ್ಮನ್ನು ನೋಡುತ್ತಾರೆ. ಯಾವುದಾದರೂ ಕೆಲಸ ತೆಗೆದುಕೊಂಡು ಹೋದರೆ ಸರಿಯಾಗಿ ಸ್ಪಂದಿಸುವುದಿಲ್ಲ. ಬಹುತೇಕ ಸಮಯದಲ್ಲಿ ಸಚಿವರು ನಮ್ಮನ್ನು ಭೇಟಿ ಮಾಡಲು ಸಹ ಇಚ್ಛಿಸುವುದಿಲ್ಲ ಎಂದು ಕಾಂಗ್ರೆಸ್‌ನ ಕೆಲ ಹಿರಿಯ ಶಾಸಕರು ಮುಖ್ಯಮಂತ್ರಿಗೆ ದೂರು ನೀಡಿದರು. ಪ್ರತಿ ಭಾರಿ ಶಾಸಕಾಂಗ ಪಕ್ಷದ ಸಭೆ ನಡೆದಾಗಲೆಲ್ಲ ನಾವುಗಳು ಸಚಿವರ ಕಾರ್ಯವೈಖರಿ ಬಗ್ಗೆ ತಮಗೆ ಹೇಳಿದ್ದೇವೆ. ಶಾಸಕರ ಶಿ¶ಾರಸುಗಳಿಗೆ ಮನ್ನಣೆ ನೀಡುತ್ತಿಲ್ಲದಿರುವುದರ ಬಗ್ಗೆಯೂ ಗಮನಕ್ಕೆ ತಂದಿದ್ದೇವೆ. ಇದುವರೆಗೂ ಮುಖ್ಯಮಂತ್ರಿಗಳಾಗಲೀ, ಪಕ್ಷದ ಅಧ್ಯಕ್ಷರಾಗಲೀ ಇದನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ. ಬಹುತೇಕ ಎಲ್ಲಾ ಶಾಸಕರು ಸಚಿವರ ಕಾರ್ಯವೈಖರಿಗೆ ಬೇಸತ್ತಿದ್ದಾರೆ ಎಂದರು.

No Comments to “ಆಕ್ರೋಶಕ್ಕೆ ಗುರಿಯಾಗಿ ಹೊರ ನಡೆದ ಸಚಿವರು”

add a comment.

Leave a Reply